ದಕ್ಷಿಣ ಕನ್ನಡ -
ಕರ್ನಾಟಕ ರಾಜ್ಯದ ಪಶ್ಚಿಮ ಕರಾವಳಿ ಯಲ್ಲಿರುವ ಒಂದು ಜಿಲ್ಲೆ. ಉತ್ತರಕ್ಕೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳು, ದಕ್ಷಿಣಕ್ಕೆ ಕೇರಳ ರಾಜ್ಯದ ಕಾಸರಗೋಡು ತಾಲ್ಲೂಕು ಮತ್ತು ಕೊಡಗು ಜಿಲ್ಲೆ, ಪೂರ್ವಕ್ಕೆ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳು ಮತ್ತು ಪಶ್ಚಿಮಕ್ಕೆ ಅರಬ್ಬೀ ಸಮುದ್ರ ಇವೆ. ಈ ಜಿಲ್ಲೆಯ ವಿಸ್ತೀರ್ಣ 14,843ಚ.ಕಿಮೀ. ಜನಸಂಖ್ಯೆ 18,96,403. 1997ರಲ್ಲಿ ನಡೆದ ಜಿಲ್ಲೆಗಳ ಪುನರ್ವಿಂಗಡಣೆ ಯಾದಾಗ ಇದರ ಕೆಲವು ತಾಲ್ಲೂಕುಗಳನ್ನು ಸೇರಿಸಿ ಉಡುಪಿ ಜಿಲ್ಲೆಯನ್ನು (ನೋಡಿ- ಉಡುಪಿ) ರಚಿಸಲಾಗಿದೆ. ಹಾಲಿ ಜಿಲ್ಲೆಯಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು ಮತ್ತು ಬಂಟ್ವಾಳ ಎಂಬ 5 ತಾಲ್ಲೂಕುಗಳು 17 ಹೋಬಳಿಗಳೂ 371 ಗ್ರಾಮಗಳೂ 68 ಪಟ್ಟಣಗಳೂ ಇವೆ.

	ಜಿಲ್ಲೆಯನ್ನು ಮುಖ್ಯವಾಗಿ ಮೂರು ಭೌಗೋಳಿಕ ವಿಭಾಗಗಳಾಗಿ ವಿಂಗಡಿಸಬಹುದು. ಅವು ಪೂರ್ವಭಾಗದ ಘಟ್ಟಪ್ರದೇಶ ಮತ್ತು ಇದಕ್ಕೂ ಸಮುದ್ರಕ್ಕೂ ಮಧ್ಯೆ ಇರುವ ಸುಮಾರು ಮಟ್ಟವಾದ ಪ್ರದೇಶ ಹಾಗೂ ಕರಾವಳಿ ಪ್ರದೇಶ. ಈ ಭಾಗಗಳು ಸುಮಾರು ದಕ್ಷಿಣೋತ್ತರವಾಗಿ ಹಬ್ಬಿವೆ. ಪೂರ್ವಭಾಗ ಪಶ್ಚಿಮಘಟ್ಟಶ್ರೇಣಿಯ ಪ್ರದೇಶ. ಕೆಲವೆಡೆ ಶಿಖರಗಳ ಎತ್ತರ 910ರಿಂದ 1,830 ಮೀಟರುಗಳಷ್ಟಿದೆ. ಬೆಳ್ತಂಗಡಿಗೆ ಪೂರ್ವಾಬಿsಮುಖವಾಗಿ ಹಬ್ಬಿರುವ ಕುದುರೆ ಮುಖ ಎತ್ತರವಾಗಿದೆ. ಚಾರ್ಮಾಡಿ ಘಾಟ್‍ನ ದಕ್ಷಿಣಕ್ಕಿರುವ ಕಟ್ಟೆಗುಡ್ಡ (1,328ಮೀ), ಬಿಸಿಲೆಘಾಟ್‍ಗೆ ಎದುರಾಗಿರುವ ಸುಳ್ಯ ತಾಲ್ಲೂಕಿನ ಸುಬ್ರಹ್ಮಣ್ಯ (1,727ಮೀ) ಮತ್ತು ಹಳೆ ಸಿಸಲ  ಘಾಟ್ ಮೇಲಿರುವ ಸಿಸಲಕಲ್ ಶಿಖರ (1,195ಮೀ) ಇವೆ. ಜಿಲ್ಲೆಯ ಭಾಗದಲ್ಲಿರುವ ಪಶ್ಚಿಮ ಘಟ್ಟ ಶ್ರೇಣಿ ಉತ್ತರದ ಕಡೆ ಕಡಿದಾದ ಗೋಡೆಗಳಾಗಿ ಮೇಲೆದ್ದಿದೆ. ದಕ್ಷಿಣ ಭಾಗದಲ್ಲಿನ ಶ್ರೇಣಿ ಸಮುದ್ರದಿಂದ ಹೆಚ್ಚು ದೂರವಿದ್ದು, ಹಲವು ಸಮಾನಾಂತರ ಶ್ರೇಣಿಗಳು ಇದರಿಂದ ಪಶ್ಚಿಮಕ್ಕೆ ಹಬ್ಬಿ, ಮಧ್ಯೆಮಧ್ಯೆ ಕಂದರಗಳು ಮತ್ತು ಕಣಿವೆಗಳನ್ನು ನಿರ್ಮಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ನದಿಗಳು ಉಗಮಿಸಿ ಪ್ರವಹಿಸುವುದು ಇಲ್ಲಿಯೇ. ಈ ಘಟ್ಟಗಳ ಹಂದರದ ನಡುನಡುವೆ ಕಣಿವೆಗಳ ಕೆಳಭಾಗದಲ್ಲಿರುವ ಕಿರುಬಯಲುಗಳು ಘಟ್ಟದ ಮೇಲಿನಿಂದ ನೋಡುವವರಿಗೆ ಇಡೀ ಭೂದೃಶ್ಯಕ್ಕೆ ಅಲ್ಲಲ್ಲಿ ಹಸುರು ಬೊಟ್ಟು ಇಟ್ಟಂತೆ ಕಂಡುಬರುತ್ತವೆ. ಈ ಪರ್ವತಪ್ರದೇಶ ದಟ್ಟವಾದ ಅರಣ್ಯಗಳಿಂದ ಕೂಡಿ ಜಲ ಮತ್ತು ಪ್ರಾಣಿ ಹಾಗೂ ಅರಣ್ಯಸಂಪತ್ತಿನ ಆಗರವಾಗಿದೆ. ಅಡ್ಡ ಶ್ರೇಣಿಗಳಲ್ಲಿ ಬಲ್ಲಾಳರಾಯನದುರ್ಗದಿಂದ ಧರ್ಮಸ್ಥಳದವರೆಗೆ ಹಬ್ಬಿರುವ ಚಿಬ್ಬದ್ರಿ ಪರ್ವತ ಶ್ರೇಣಿ ಅತಿ ಉದ್ದವಾಗಿದೆ. ಕುದುರೆಮುಖದಿಂದ ಹೊರಟು ಜಮಾಲಾಬಾದ್ - ಮೂಡಬಿದರೆ ಎಡೆಗೆ ಹಾಯುವ ಮತ್ತೊಂದು ಪಂಕ್ತಿ ಸಹ ದೊಡ್ಡದು.

	ಈ ಘಟ್ಟ ಪ್ರದೇಶದಿಂದ ಇಳಿದು ಪಶ್ಚಿಮದಲ್ಲಿ ಮುಂದೆ ಹೋದರೆ ಕಡಿಮೆ ಎತ್ತರದ ಬಯಲು ಪ್ರದೇಶ ಬರುತ್ತದೆ. ಹಾಗೇ ಮುಂದೆ ಹೋದಂತೆಲ್ಲ ಎತ್ತರವಲ್ಲದ ಗುಡ್ಡಗಳು ವಿರಳವಾಗಿ ಕಂಡುಬರುತ್ತವೆ. ಅಲ್ಲಿ ಸಾಗುವಳಿಗೆ ಯೋಗ್ಯವಾದ ಬಯಲುಗಳು ಮತ್ತು ಎತ್ತರದ ಬರಡು ಪ್ರದೇಶಗಳಿವೆ. ಈ ಜಿಲ್ಲೆಯ ತೀರಪ್ರದೇಶ ಬಹುತೇಕ ನೇರವಾಗಿದೆ. ಆದರೆ ನದಿಗಳು ಸಮುದ್ರ ಸೇರುವ ಸ್ಥಳಗಳಲ್ಲಿ ಮತ್ತು ಇನ್ನಿತರೆಡೆಗಳಲ್ಲಿ ಕೊರೆತದಿಂದ ಕೊಲ್ಲಿ ಹಾಗೂ ಒಳಚಾಚುಗಳುಂಟಾಗಿವೆ.ಕೋಟೆ ಕಟ್ಟಿದಂತಿರುವ ಪಶ್ಚಿಮ ಘಟ್ಟ ಶ್ರೇಣಿಗಳು. ಅವುಗಳ ಮೇಲೆ ಗೆರೆ ಎಳೆದಂತೆ ಕಾಣುವ ರಸ್ತೆಗಳು, ವೈಭವೋಪೇತ ಅರಣ್ಯರಾಶಿ. ಅದ್ಭುತವಾದ ಗಿರಿಕಂದರಗಳು, ಪರ್ವತಗಳ ಇಳಿಜಾರಿನಿಂದ ದೌಡಾಯಿಸುವ ಅಸಂಖ್ಯಾತ ತೊರೆಗಳು, ರೋಮಾಂಚನಗೊಳಿಸುವ ಶಿಖರಸಮೂಹ, ಮನೋಲ್ಲಾಸಕ್ಕೂ ಸಾಹಸ ಪ್ರವೃತ್ತಿಗೂ ಪ್ರಚೋದಕವಾದ ಸಮುದ್ರತೀರ - ಇವು ಅಲ್ಲಿಯ ಸ್ವಾಭಾವಿಕ ಸನ್ನಿವೇಶವನ್ನು ಜೀವಂತಗೊಳಿಸಿವೆ.

	ಜಿಲ್ಲೆಯ ಭೂಶಿಲಾರಚನೆಗಳನ್ನು ಧಾರವಾಡ ಶಿಲಾವರ್ಗ, ಮಧ್ಯಂತರ ಸೇರ್ಪಡೆಗಳು ಮತ್ತು ಈಚಿನ ರಚನೆಗಳು ಎಂದು ವಿಂಗಡಿಸಬಹುದು. ಕೊನೆಯದನ್ನು ಬಿಟ್ಟು ಮಿಕ್ಕವು ಬಹು ಪ್ರಾಚೀನವಾದ ಆರ್ಕೇಯಿಯನ್ ಯುಗಕ್ಕೆ ಸೇರಿದವು. ಧಾರವಾಡ ಶಿಲಾವರ್ಗದಲ್ಲಿ ಅನೇಕ ಸ್ವರೂಪಾಂತರಿಕ ಪ್ರಾಚೀನ ಶಿಲೆಗಳಿವೆ. ಇವುಗಳಲ್ಲಿ ಮುಖ್ಯವಾಗಿ ಪದರಯುತ ಕಬ್ಬಿಣ ಮಿಶ್ರಿತ ಕ್ವಾರ್ಟ್‍ಸೈಟ್ ಮತ್ತು ಸ್ವಲ್ಪಮಟ್ಟಿಗೆ ಟಾಲ್ಕ್ ಮತ್ತು ಹಾರ್ನ್‍ಬ್ಲೆಂಡ್ ಶಿಸ್ಟ್ ಕಂಡುಬರುತ್ತವೆ. ಕ್ವಾರ್ಟ್‍ಸೈಟ್‍ಗಳು ಜಿಲ್ಲೆಯ ಪೂರ್ವಭಾಗದಲ್ಲಿ ಐದು ಶ್ರೇಣಿಗಳಲ್ಲಿ ಹಬ್ಬಿವೆ. ಬಯೋಟೈಟ್ ನೈಸ್‍ಗ¼
ಮಧ್ಯೆ ಸಣ್ಣ ಪದರಗಳಲ್ಲಿ ಟಾಲ್ಕ್ ಕಾಣುತ್ತದೆ. ಅವುಗಳಲ್ಲಿನ ಇತ್ತೀಚಿನ ಒಂದು ಹೊಡೆಪೆÇರೆ ಬೆಳ್ತಂಗಡಿ ಬಳಿ ಇದೆ. ಹಾರ್ನಬ್ಲೆಂಡ್ ಹೊಡೆಪೆÇರೆಗಳು ಅಲ್ಲಲ್ಲಿ ಅಪರೂಪವಾಗಿ ಕಾಣಸಿಗುತ್ತವೆ. ಬಯೋಟೈಟ್ ನೈಸ್ ಶಿಲೆ ಜಿಲ್ಲೆಯಲ್ಲಿ ವಿಸ್ತಾರವಾಗಿ ಹರಡಿದೆ. ಇವುಗಳ ಹರವು ಸುಮಾರು ಪಶ್ಚಿಮ ಘಟ್ಟಗಳಿಗೆ ಸಮಾನಾಂತರವಾಗಿದೆ. ಇವುಗಳ ಮಧ್ಯೆ ಅಲ್ಲಲ್ಲಿ ಸ್ಟೆರಾಕ್ಸೆನೈಟ್, ಆಂಪಿs ಬಯೋಟೈಟ್, ಡಾಲರೈಟ್ ಮೊದಲಾದವುಗಳ ಹೊಡೆ ಶಿಲೆಗಳಿರುವುದುಂಟು. ಜಂಬುಕಲ್ಲು ಕರಾವಳಿ ಪ್ರದೇಶದಲ್ಲಿ ಬಹುಮಟ್ಟಿಗೂ ಒಳಭಾಗದಲ್ಲಿ ಸ್ವಲ್ಪಮಟ್ಟಿಗೂ ಇದೆ. ಕರಾವಳಿ ಪ್ರದೇಶದ ಮೆಕ್ಕಲು, ಜೇಡಿ ಮತ್ತು ಸುಣ್ಣಕಲ್ಲು ಪದರಗಳು ಈಚಿನ ರಚನೆಗಳು.

ಈಚೆಗೆ ನಡೆದಿರುವ ಪರಿಶೋಧನೆಗಳಿಂದ ಈ ಜಿಲ್ಲೆಯಲ್ಲಿ ಉಪಯುಕ್ತ ಖನಿಜಗಳಿರುವುದು ತಿಳಿದುಬಂದಿದೆ. ಜೋಗಿಮಲೈ ಬೆಟ್ಟ ಮತ್ತು ಉಪ್ಪಿನಂಗಡಿ ಬಳಿ ಕುರಂಗದ ಕಲ್ಲುಗಳ ನಿಕ್ಷೇಪಗಳಿವೆ. ಸುಬ್ರಹ್ಮಣ್ಯ ಮತ್ತು ಸುಳ್ಯ ತಾಲ್ಲೂಕಿನ ಗುಂಡಿಯ ಮೊದಲಾದೆಡೆಗಳಲ್ಲಿ ಗಾರ್ನೆಟ್ ದೊರಕುತ್ತದೆ. ಪುತ್ತೂರು ತಾಲ್ಲೂಕಿನ ಮುದನೂರು ಹೊಳೆಯ ಮೆಕ್ಕಲು ಮಣ್ಣಿನಲ್ಲಿ ಬಂಗಾರ ಕಂಡುಬಂದಿದೆ. ಪುತ್ತೂರು ಮತ್ತು ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಹಲವೆಡೆ ಕಬ್ಬಿಣ ನಿಕ್ಷೇಪಗಳಿವೆ. ಇಲ್ಲಿ ಸಿಕ್ಕುವ ಅದಿರಿನಲ್ಲಿ ಸೇ.54ರಿಂದ 57ರವರೆಗೆ ಕಬ್ಬಿಣ ಇರುವುದು ಕಂಡುಬಂದಿದೆ. ಪಣಂಬೂರು ಬಳಿ ಮತ್ತು ಮಂಗಳೂರು ತಾಲ್ಲೂಕು ಹಾಗೂ ಇತರೆಡೆಗಳಲ್ಲಿ ಗ್ರಾನೈಟಿಕ್ ರೂಪದ ಬೆಣಚುಕಲ್ಲನ್ನು ಬಂದರು ಮತ್ತು ಕಟ್ಟಡಗಳ ರಚನೆಗಾಗಿ ಅಗಾಧ ಪ್ರಮಾಣದಲ್ಲಿ ತೆಗೆದು ಬಳಸಲಾಗುತ್ತಿದೆ. ಕ್ಯಾನೈಟ್, ಸುಣ್ಣದ ಚಿಪ್ಪು, ಸಿಲಿಕ ಮರಳು, ಸಿಲಿಮನೈಟ್ ಮತ್ತು ಸೋಪುಕಲ್ಲು ಹಾಗೂ ಹೆಂಚಿನ ಜೇಡಿಮಣ್ಣುಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ದೊರೆಯುತ್ತವೆ.

	ಇಲ್ಲಿನ ಭೌಗೋಳಿಕ ಸ್ವರೂಪದಿಂದಾಗಿ ಈ ಜಿಲ್ಲೆ ಹೆಚ್ಚಿನ ಜಲಸಮೃದ್ಧಿ ಪಡೆದಿದೆ. ಪಶ್ಚಿಮ ಘಟ್ಟಗಳು ಮುಂಗಾರು ಮಾರುತಗಳನ್ನು ತಡೆಯುವುದರಿಂದ ಇಲ್ಲಿ ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ಭಾರಿ ಮಳೆ ಬೀಳುತ್ತದೆ. ಘಟ್ಟದ ಪಶ್ಚಿಮ ಭಾಗಕ್ಕೆ ಬಿದ್ದ ನೀರೆಲ್ಲ ಈ ಜಿಲ್ಲೆಯಲ್ಲಿಯೇ ಹರಿದು ಸಮುದ್ರ ಸೇರುತ್ತದೆ. ಇಲ್ಲಿ ಹುಟ್ಟುವ ನದಿಗಳು ಸಾಮಾನ್ಯವಾಗಿ 150ರಿಂದ 160ಕಿಮೀ ಗಳಿಗಿಂತ ಹೆಚ್ಚು ಉದ್ದವಿಲ್ಲ. ಮಳೆಯ ಜೊತೆಗೆ ಭೂಗರ್ಭದಿಂದ ಚಿಮ್ಮುವ ನೀರು ಕೂಡ ಪಶ್ಚಿಮದ ಇಳಿಜಾರಿನ ಕಡೆಯೇ ಹರಿಯುವುದರಿಂದ ಇಲ್ಲಿನ ನದಿಗಳು ಮಳೆ ಗಾಲದಲ್ಲಿ ತುಂಬಿ ಹರಿಯುತ್ತವೆ. ಇದರಿಂದ ಭಾರಿ ಪ್ರವಾಹ ಉಂಟಾಗುತ್ತದೆ. ಇಲ್ಲಿ ನದಿಗಳ ಉದ್ದ ಕಡಿಮೆ ಇರುವುದರಿಂದ ಪ್ರವಾಹವು ಬೇಗ ಇಳಿಯುವ ಸಾಧ್ಯತೆ ಇದೆ.

	ನೇತ್ರಾವತಿ, ಗುರುಪುರ ಮತ್ತು ಕುಮಾರಧಾರಾ - ಇವು ಈ ಜಿಲ್ಲೆಯಲ್ಲಿ ಹರಿಯುವ ಮುಖ್ಯ ನದಿಗಳು. ಕುದುರೆಮುಖದಲ್ಲಿ ಹುಟ್ಟುವ ನೇತ್ರಾವತಿ ನದಿ ಕುಮಾರಧಾರಾ ಮತ್ತು ಗುರುಪುರ ಉಪನದಿಗಳನ್ನು ಕೂಡಿಕೊಂಡು ಮಂಗಳೂರಿನ ಬಳಿ ಸಮುದ್ರವನ್ನು ಸೇರುತ್ತದೆ. ನದಿಗಳು ಸಮುದ್ರ ಸೇರುವ ಎಡೆಗಳಲ್ಲಿ ಮರಳಿನಿಂದ ಕೂಡಿದ ವಿಶಾಲ ಭಾಗಗಳಿವೆ. ಈ ಪ್ರದೇಶ ದೋಣಿಸಂಚಾರಕ್ಕೆ ಅನುಕೂಲವಾಗಿದೆ. ಕೆಲವೊಮ್ಮೆ ಈ ನದಿಗಳ ಪ್ರವಾಹದಿಂದ ಭಾರಿ ಹಾನಿಯಾಗುವುದೂ ಉಂಟು. ಈ ನದಿಗಳಲ್ಲದೆ ಅನೇಕ ಕೆರೆಗಳೂ ಇವೆ.

	ಈ ಜಿಲ್ಲೆಯಲ್ಲಿ ಒಟ್ಟು 1,28,478 (1988-89) ಹೆಕ್ಟೇರ್‍ಗಳ ಅರಣ್ಯ ಪ್ರದೇಶವಿದ್ದು ಜಿಲ್ಲೆಯ ಒಟ್ಟು ವಿಸ್ತೀರ್ಣದಲ್ಲಿ ಸೇ.29 ಭಾಗವನ್ನು ಆವರಿಸಿದೆ. ಕಾಡುಗಳಲ್ಲಿ ನಿತ್ಯ ಹರಿದ್ವರ್ಣ ಮತ್ತು ಎಲೆ ಉದುರುವ ಸಸ್ಯವರ್ಗಗಳಿವೆ. ಮರಮುಟ್ಟಿಗೆ ಉಪಯುಕ್ತವಾಗುವ ಮತ್ತಿ, ನಂದಿ, ಮರವು, ಕರಿಮರ, ಸಾಗುವಾನಿ, ಕೋಗಿಲೆ, ಕೀರಲ್‍ಭೋಗಿ, ಸಿರಿಹೊನ್ನೆ, ತೇಗ, ಹಲಸು, ದಬ್ಬೆ ಮೊದಲಾದವಲ್ಲದೆ ಆಲ, ಅತ್ತಿ, ಅರಳೆ, ಬೇವು, ಮಾವು ಮುಂತಾದ ಮರಗಳೂ ಇವೆ. ಕಾಡಿನಲ್ಲಿ ಬಿದಿರು, ಬೆತ್ತ, ವಾಟೆ, ಕೇದಿಗೆ, ಈಚಲು, ಬಗನಿ ಮೊದಲಾದವೂ ಇವೆ. ಏಲಕ್ಕಿ, ಮೆಣಸು, ಸೀಗೆ, ವೀಳ್ಯದೆಲೆ, ತೆಂಗು, ಶುಂಠಿ, ಗೇರು - ಇವು ಕಾಡುಗಳಲ್ಲೂ ತೋಟಗಳಲ್ಲೂ ಕಂಡುಬರುವ ಮುಖ್ಯ ವಾಣಿಜ್ಯ ಬೆಳೆಗಳಾಗಿವೆ. ನಿಂಬೆ, ಕಾಡುಕಂಚಿ ಹುಳಿ, ದೊಡ್ಡೆಳ್ಳಿಕಾಯಿ, ಸಿಯಾಲಿ ಹಣ್ಣು, ಕಾಡುಕಿತ್ತಲೆ, ಚಕ್ಕೋತ, ನೆಲ್ಲಿಕಾಯಿ ಮೊದಲಾದ ಹುಳಿಫಲಗಳನ್ನೀಯುವ ಸಸ್ಯಗಳೂ ಇವೆ.

	ದಕ್ಷಿಣ ಭಾರತದ ಕಾಡುಗಳಲ್ಲಿ ಕಂಡುಬರುವ ಬಹುತೇಕ ಪ್ರಾಣಿವರ್ಗಗಳೆಲ್ಲ ಇಲ್ಲಿವೆ. ಜಿಂಕೆ, ಕಾಟಿ, ಕಡವೆ, ಹುಲಿ, ಚಿರತೆ, ಕಾಡುಹಂದಿ, ಕುರಿ, ತೋಳ ಮುಂತಾದ ದೊಡ್ಡ ಪ್ರಾಣಿಗಳಿಂದ ಹಿಡಿದು ಉಡು, ಚಿಪ್ಪಿಗ, ಹಾರಬೆಕ್ಕು, ಕೆಂಜಳಿಲು ಮೊದಲಾದ ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ. ಮಲೆನಾಡಿನಿಂದ ಬರುವ ಆನೆಗಳು ಕೆಲವೊಮ್ಮೆ ಇಲ್ಲಿಯ ಅರಣ್ಯಗಳಲ್ಲಿ ಕಾಣಿಸಿಕೊಳ್ಳುವುದೂ ಉಂಟು. ಹೆಬ್ಬಾವಿನಿಂದ ಹಿಡಿದು ಹಸುರು ಹಾವಿನವರೆಗೆ ವಿವಿಧ ಉರಗ ಜಾತಿಗಳಿವೆ. ಕಾಡುಕೋಳಿ, ಕೋಗಿಲೆ, ಹದ್ದು, ಗಿಡಗ, ಗಿಣಿ ಮೊದಲಾದ ವಿವಿಧ ಪಕ್ಷಿ ಜಾತಿಗಳನ್ನೂ ನದಿಗಳಲ್ಲಿ ಮೊಸಳೆಗಳನ್ನೂ ಕಾಣಬಹುದು.

	ಈ ಜಿಲ್ಲೆಯ ವಾಯುಗುಣದ ಮುಖ್ಯ ಲಕ್ಷಣಗಳೆಂದರೆ ಅತ್ಯದಿsಕ ಮಳೆ, ಅದಿsಕ ತೇವಾಂಶ ಮತ್ತು ಭಾರಿ ಸೆಕೆ. ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ಅದಿsಕ ಮಳೆ ಇರುತ್ತದೆ. ಮಾರ್ಚಿಯಿಂದ ಮೇವರೆಗೆ ಸೆಕೆ ಹೆಚ್ಚು. ಈ ಜಿಲ್ಲೆಯ ಬಹುಭಾಗ ಸಮುದ್ರಮಟ್ಟಕ್ಕೆ ಹೆಚ್ಚು ಎತ್ತರವಿಲ್ಲದ್ದರಿಂದ ವರ್ಷದ ಬಹು ಕಾಲದಲ್ಲಿ ಸೆಕೆಯ ಅನುಭವ ವಾಗುತ್ತದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 3,930ಮಿಮೀ. ಇಲ್ಲಿ ಬಿರುಗಾಳಿಯಿಂದ ಕೂಡಿದ ಮಳೆ ಆಗಾಗ ಬರುವುದುಂಟು. ಕೆಲವೆಡೆಗಳಲ್ಲಿ ಒಂದೇ ದಿನದಲ್ಲಿ 20" ಗಿಂತ ಹೆಚ್ಚು ಮಳೆಯಾಗುವ ಸಂಭವವುಂಟು. ಬೇಸಗೆಯಲ್ಲಿ ಅತಿ ಗರಿಷ್ಠ ಉಷ್ಣಾಂಶ 37.80 ಸೆ., ಅತಿ ಕನಿಷ್ಠ  ಉಷ್ಣಾಂಶ 16.70 ಸೆ

ಜಿಲ್ಲೆಯ ಒಟ್ಟು ವಿಸ್ತೀರ್ಣದಲ್ಲಿ ಸೇಕಡ 30 ಭಾಗದಷ್ಟು ಪ್ರದೇಶದಲ್ಲಿ ಮಾತ್ರ ಬೆಳೆ ಬೆಳೆಯಲಾಗುತ್ತಿದೆ. ಬತ್ತ, ಕಬ್ಬು, ಅಡಕೆ, ಏಲಕ್ಕಿ, ಮೆಣಸು, ರಾಗಿ, ರಬ್ಬರ್, ಗೇರು ಮೊದಲಾದ ಬೆಳೆಗಳನ್ನು ಬೆಳೆಯುತ್ತಾರೆ. ತೀರಪ್ರದೇಶದ ಕಡೆ ಇರುವ ಬಯಲುಗಳಲ್ಲಿ ಮಣ್ಣು ಹೆಚ್ಚು ಫಲವತ್ತಾಗಿದ್ದು ವ್ಯವಸಾಯಕ್ಕೆ ಹೆಚ್ಚು ಉಪಯುಕ್ತವಾಗಿದೆ. ಜಿಲ್ಲೆಯಲ್ಲಿ ಸಣ್ಣ ಹಿಡುವಳಿಗಳೇ ಅದಿsಕ ಸಂಖ್ಯೆಯಲ್ಲಿವೆ. ಬೆಳೆ ಬೆಳೆಯುವುದನ್ನು ಅನುಸರಿಸಿ ಗದ್ದೆಗಳನ್ನು ಕೊಳಕೆಗದ್ದೆ, ಬೈಲುಗದ್ದೆ, ಮತ್ತು ಪಟ್ಲ್ ಗದ್ದೆ ಎಂದು ಕರೆಯುತ್ತಾರೆ. ತೆಂಗು, ಅಡಕೆ, ಏಲಕ್ಕಿ ಬೆಳೆಯುವ ತೋಟಗಳಿಗೆ ಬಾಗಾಯ್ತು ಎಂದು ಕರೆಯುತ್ತಾರೆ. ಅಲ್ಲಲ್ಲಿ ರಬ್ಬರ್ ಸಾಗುವಳಿ ನಡೆದಿದೆ. ಕುತ್ಪಾಜೆಯಲ್ಲಿ ರಬ್ಬರ್ ಹದಮಾಡುವ ಕಾರ್ಖಾನೆ ಇದೆ. ಪಶ್ಚಿಮ ಘಟ್ಟದ ತಗ್ಗು ಪ್ರದೇಶದಲ್ಲಿ ಮೆಣಸು, ಏಲಕ್ಕಿ ಬೆಳೆಯುತ್ತಾರೆ. ಈ ಬೆಳೆಗಳಲ್ಲದೆ ಕೆಲವು ವಿದೇಶಿ ಸಸ್ಯಗಳನ್ನು ತಂದು ಇಲ್ಲಿ ಸಾಗುವಳಿ ಮಾಡಲಾಗಿದೆ. ಅವುಗಳಲ್ಲಿ ಕೋಕೊ, ಕೆಂಪು ಎಣ್ಣೆ ತಾಳೆ ಮುಖ್ಯವಾದವು. ಇತ್ತೀಚೆಗೆ ವೆನಿಲ ಬಳ್ಳಿ ಬೆಳೆಯುವುದು ಕಂಡುಬರುತ್ತಿದೆ. ಆಹಾರ ಬೆಳೆಗಳಲ್ಲಿ 67,754 ಹೆಕ್ಟೇರ್‍ಗಳಲ್ಲಿ ಬತ್ತದ ಬೆಳೆ ಇದೆ. ನೂರಾರು ಹೆಕ್ಟೇರ್‍ಗಳಲ್ಲಿ ರಾಗಿಯನ್ನೂ ಉದ್ದನ್ನೂ ಬೆಳೆಯುತ್ತಾರೆ. ಇತರ ದ್ವಿದಳ ಧಾನ್ಯ ಬೆಳೆಯುವ ಕ್ಷೇತ್ರ 4,497 ಹೆಕ್ಟೇರುಗಳು. 565ಹೆಕ್ಟೇರ್‍ಗಳಲ್ಲಿ ಕಬ್ಬನ್ನು ಬೆಳೆಯುತ್ತಾರೆ. (1998-99). ಕಬ್ಬನ್ನು ಹೆಚ್ಚಾಗಿ ಕರಾವಳಿ ಮತ್ತು ನದಿಗಳ ತೀರದಲ್ಲಿ ಬೆಳೆಯುತ್ತಾರೆ. ಆಲೂಗೆಡ್ಡೆ, ನೆಲಗಡಲೆ, ಮೆಣಸಿನಕಾಯಿ ಮೊದಲಾದವನ್ನೂ ಬೆಳೆಯುವುದುಂಟು. ವಾರ್ಷಿಕ ಅಕ್ಕಿಯ ಉತ್ಪಾದನೆ 1,41,211 ಟನ್‍ಗಳು. ಕಬ್ಬಿನ ಉತ್ಪಾದನೆ 45,087 ಟನ್‍ಗಳು.

	ವ್ಯವಸಾಯದ ನೆರವಿಗಾಗಿ 1968ರಲ್ಲಿ ಮಂಗಳೂರಿನಲ್ಲಿ ಮಣ್ಣು ಪರೀಕ್ಷಣಾ ಪ್ರಯೋಗಾಲಯವನ್ನು ಸ್ಥಾಪಿಸಲಾಯಿತು. ಮಂಗಳೂರಿಗೆ ಸು.4ಕಿಮೀ ದೂರದ ಜಪ್ಪಿನಮೊಗರುವಿನಲ್ಲಿ 1944ರಲ್ಲಿ ಸ್ಥಾಪಿತವಾದ ವ್ಯವಸಾಯ ಸಂರಕ್ಷಣಾ ಕೇಂದ್ರವಿದೆ. ತೋಟಗಾರಿಕೆ ಇಲಾಖೆಯು ತೆಂಗು, ಅಡಕೆ, ಪರಂಗಿ, ಬಾಳೆಹಣ್ಣು, ಗೋಡಂಬಿ, ದಾಲ್ಚಿನ್ನಿ ಮರ,  ಮೆಣಸು, ಬೆಳ್ಳುಳ್ಳಿ ಮೊದಲಾದ ಸಂಬಾರ ಪದಾರ್ಥಗಳ ಬೆಳೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಜಿಲ್ಲೆಯಲ್ಲಿ 4 ಬಿತ್ತನೆ ಬೀಜದ ಫಾರಂಗಳಿವೆ. ಈ ಜಿಲ್ಲೆಯಲ್ಲಿ ಬಯಲುಗಳು ಕಿರಿದಾಗಿ ಹೆಚ್ಚು ಏರುತಗ್ಗುಗಳಿಂದ ಕೂಡಿರುವುದರಿಂದ ಭಾರಿ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿಲ್ಲ. ಸಣ್ಣ ಪ್ರಮಾಣದ ನೀರಾವರಿ ಯೋಜನೆಗಳು ಫಲಪ್ರದವಾಗಿ ನಡೆದಿವೆ. ಅವುಗಳಲ್ಲಿ ಪುತ್ತೂರು ತಾಲ್ಲೂಕಿನ ಗೌರಿಹೊಳೆ, ಬಂಟ್ವಾಳ ತಾಲ್ಲೂಕಿನ ಹಂಚಿಕಟ್ಟೆ ಮತ್ತು ನೇತ್ರಾವತಿ ಹಾಗೂ ಕಟ್ಟೆಹೊಳೆ ಜಲಾಶಯ ಯೋಜನೆ - ಇವು ಮುಖ್ಯವಾದವು. ಕೆರೆಗಳು, ಬಾವಿಗಳು ಮತ್ತಿತರ ಸಾಧನಗಳಿಂದ ಒಟ್ಟು 66,015 ಹೆಕ್ಟೇರುಗಳಿಗೆ ನೀರಾವರಿ ಒದಗಿಸಲಾಗಿದೆ (1998-99).

	ಜಾನುವಾರುಗಳ ಸಂಪತ್ತಿನಲ್ಲಿ ಜಿಲ್ಲೆ ಉತ್ತಮವಾಗಿದೆ. ಜಿಲ್ಲೆಯಲ್ಲಿ ಈ ಜಾನುವಾರುಗಳ ಆರೈಕೆಗಾಗಿ 9 ಪಶುವೈದ್ಯ ಆಸ್ಪತ್ರೆಗಳು, 20 ಚಿಕಿತ್ಸಾಲಯಗಳು, 54 ಪ್ರಾಥಮಿಕ ಪಶುವೈದ್ಯ ಕೇಂದ್ರಗಳಿವೆ (2000).  5 ಸಂಚಾರಿ ಚಿಕಿತ್ಸಾಲಯಗಳು, 5 ಕೃತಕ ಗರ್ಭಧಾರಣಾ ಕೇಂದ್ರಗಳಿವೆ. ಮತ್ಸ್ಯಸಂಪತ್ತಿಗೆ ಜಿಲ್ಲೆ ಹೆಸರಾದುದು. 2000-01ರಲ್ಲಿ ಮತ್ಸೋತ್ಪನ್ನ 81,410 ಮೆಟ್ರಿಕ್ ಟನ್‍ಗಳು.

	ದಕ್ಷಿಣ ಕನ್ನಡ ಜಿಲ್ಲೆ ಕೈಗಾರಿಕೆಯಲ್ಲೂ ಗಣನೀಯ ಪ್ರಗತಿ ಸಾದಿsಸಿದೆ. ಇಲ್ಲಿನ ಅರಣ್ಯೋತ್ಪನ್ನಗಳು, ವ್ಯವಸಾಯ ಬೆಳೆಗಳು ಮತ್ತು ಇಲ್ಲಿನ ಬಂದರುಗಳಿಂದಾಗಿ ಕೈಗಾರಿಕೆ ಬೆಳೆದಿದೆ. ಈ ಜಿಲ್ಲೆಯಲ್ಲಿ ನೋಂದಣಿಯಾದ ಕಾರ್ಖಾನೆಗಳ ಸಂಖ್ಯೆ 4475. ಅವುಗಳಲ್ಲಿ 32,202 ಉದ್ಯೋಗಿಗಳಿದ್ದಾರೆ (2001). 7 ಕೈಗಾರಿಕಾ ಎಸ್ಟೇಟುಗಳಿವೆ, 306 ಕೈಗಾರಿಕಾ ಷೆಡ್ಡುಗಳಿವೆ (1998-99).

	ಈ ಜಿಲ್ಲೆಯಲ್ಲಿ ಕೆಲವು ದೊಡ್ಡ ಔದ್ಯೋಗಿಕ ಯೋಜನೆಗಳು ಅಸ್ತಿತ್ವಕ್ಕೆ ಬಂದಿವೆ. ಪಣಂಬೂರಿನಲ್ಲಿರುವ ಮಂಗಳೂರು    ರಾಸಾಯನಿಕ ಮತ್ತು ಗೊಬ್ಬರ ಕಾರ್ಖಾನೆ, ಮಂಗಳೂರು ಬಂದರು ನಿರ್ಮಾಣ ಯೋಜನೆ ಹಾಗೂ ಜಿಲ್ಲೆಯ ಇತರ ಸಣ್ಣ ಬಂದರುಗಳು. ಅಭಿವೃದ್ಧಿ ಯೋಜನೆಗಳು ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ. ರಾಷ್ಟ್ರೀಯ ಖನಿಜಾಭಿವೃದ್ಧಿ ಸಂಸ್ಥೆ ಕೈಗೊಂಡಿರುವ ಕುದುರೆಮುಖ ಕಬ್ಬಿಣದ ಅದಿರು ತೆಗೆಯುವ ಯೋಜನೆ ರಾಷ್ಟ್ರದಲ್ಲೇ ಒಂದು ಭಾರಿ ಉದ್ಯಮವಾಗಿದ್ದು ಇದಕ್ಕೆ ಸಂಬಂಧಪಟ್ಟ ಇತರ ಕೈಗಾರಿಕೆಗಳ ಅಭಿವೃದ್ಧಿಗೂ ಜಿಲ್ಲೆಯಲ್ಲಿ ಅವಕಾಶ ಒದಗಿದೆ.

	ಇಲ್ಲಿನ ಸಣ್ಣ ಕೈಗಾರಿಕೆಗಳು ಆರ್ಥಿಕ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. 17 ಬಟ್ಟೆ ಗಿರಣಿಗಳು, 10 ರಾಸಾಯನಿಕ ಕಾರ್ಖಾನೆಗಳು, 51 ಎಂಜಿನಿಯರಿಂಗ್ ಘಟಕಗಳು, 397 ಇತರ ಸಣ್ಣ ಕೈಗಾರಿಕಾ ಘಟಗಳಿವೆ. ಹೆಂಚಿನ ತಯಾರಿಕೆಯಲ್ಲಿ ಈ ಜಿಲ್ಲೆ ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆದಿದೆ. ಹಡಗು ಮತ್ತು ದೋಣಿಗಳ ದುರಸ್ತಿ ಕೇಂದ್ರಗಳಲ್ಲಿ ಬಹಳಷ್ಟು ಜನರಿಗೆ ಉದ್ಯೋಗ ಒದಗಿದೆ. ಗೇರುಬೀಜ ಹದಮಾಡುವ ಕಾರ್ಖಾನೆಗಳು, ಬೀಡಿ ಉದ್ಯಮ ಘಟಕಗಳು ಉಕ್ಕಿನ ತಂತಿ, ಯಂತ್ರ ಬಿಡಿಭಾಗಗಳನ್ನು ತಯಾರಿಸುವ ಘಟಕಗಳು ಲP್ಷÁಂತರ ಜನರಿಗೆ ಆಸರೆಯಾಗಿವೆ. ವ್ಯವಸಾಯ ಉಪಕರಣಗಳು, ಗೃಹಬಳಕೆ ಪಾತ್ರೆಗಳು, ಟಿನ್ ಡಬ್ಬಗಳು ಮೊದಲಾದವನ್ನು ತಯಾರಿಸುವ ಘಟಕಗಳು ಇವೆ. ವಾಹನಗಳ ಹೊರಕವಚ ರಚನೆ, ವಿದ್ಯುತ್ ಉಪಕರಣಗಳ ತಯಾರಿಕೆ ಮೊದಲಾದವುಗಳಿಗೆ ಸಂಸ್ಕರಿಸುವ ಕಾರ್ಯಾಗಾರಗಳಿವೆ. ಜಿಲ್ಲೆಯಲ್ಲಿ ಸೋಪಿನ ಕಾರ್ಖಾನೆಗಳಿವೆ. ಮರದ ವಸ್ತುಗಳನ್ನು ಸಿದ್ಧಪಡಿಸುವ ಘಟಕಗಳಿವೆ. ಇಲ್ಲಿ ಕಾಪಿsಬೀಜ ಸಿದ್ಧಪಡಿಸುವ ಗಿರಣಿಗಳೂ ಕೊಬ್ಬರಿ ಎಣ್ಣೆತಯಾರಿಸುವ ಗಿರಣಿಗಳೂ ಇವೆ. ಮೀನು ಸಂಸ್ಕರಣ ಕಾರ್ಖಾನೆಗಳೂ ಶೈತ್ಯೀಕರಣ ಕಾರ್ಖಾನೆಗಳೂ ಇವೆ. ತಂತ್ರಾಂಶ ಕಂಪೆನಿಗಳು ಈಚೆಗೆ ಆರಂಭವಾಗಿವೆ.

	ದಕ್ಷಿಣ ಕನ್ನಡ ಜಿಲ್ಲೆ ಪ್ರಾಚೀನ ಕಾಲದಿಂದಲೂ ದೇಶವಿದೇಶಗಳ ನಡುವೆ ವ್ಯಾಪಾರ ಸಂಬಂಧವಿಟ್ಟುಕೊಂಡಿತ್ತೆಂದು ಐತಿಹಾಸಿಕ ಆಧಾರಗಳಿಂದ ತಿಳಿದುಬರುತ್ತದೆ. ಆಧುನಿಕ ಕಾಲದಲ್ಲೂ ಈ ಜಿಲ್ಲೆ ಪಡೆದಿರುವ ವಿಶೇಷ ಬಂದರು ಸೌಲಭ್ಯಗಳಿಂದಾಗಿ ಇಲ್ಲಿ ವಾಣಿಜ್ಯ ಪ್ರವರ್ಧಮಾನವಾಗುತ್ತಿದೆ. ಮಂಗಳೂರು ಕರ್ನಾಟಕದ ಅತಿ ದೊಡ್ಡ ಬಂದರು. ಜಿಲ್ಲೆಯ ಮುಖ್ಯ ಪಟ್ಟಣವಾದ ಮಂಗಳೂರಿಗೆ ಮುಂಬಯಿ, ಕೊಚ್ಚಿಗಳ ನಡುವೆ ಸಮುದ್ರ ಸಂಪರ್ಕವೂ ಬೆಂಗಳೂರು ಮತ್ತು ಮದರಾಸುಗಳ ನಡುವೆ ರೈಲು ಸಂಪರ್ಕವೂ ಇದ್ದು ಉತ್ತಮ ವಾಣಿಜ್ಯ ಕೇಂದ್ರವೆನಿಸಿದೆ. ಗೋಡಂಬಿ, ಸಂಸ್ಕರಿಸಿದ ಕಾಫಿಬೀಜ, ಅಡಕೆ, ಮರಮುಟ್ಟು, ಮರದ ದಿಮ್ಮಿಗಳು, ಮೀನಿನ ಉತ್ಪನ್ನಗಳು, ಹೆಂಚು, ತೆಂಗು, ಮೆಣಸು, ಕಾಪಿs, ಏಲಕ್ಕಿ, ಕಬ್ಬಿಣದ ಅದಿರು, ಮ್ಯಾಂಗನೀಸ್ ಮೊದಲಾದ ವಸ್ತುಗಳು ಮಂಗಳೂರು ಬಂದರಿನಿಂದ ವಿದೇಶಗಳಿಗೆ ರಫ್ತಾಗುತ್ತವೆ. ಹಾಗೆಯೇ ಈ ಬಂದರಿನ ಮೂಲಕ ಆಹಾರ ಧಾನ್ಯಗಳು, ರಾಸಾಯನಿಕ ಗೊಬ್ಬರ, ಯಂತ್ರಗಳು, ಕಾಗದ ಮೊದಲಾದವು ವಿದೇಶಗಳಿಂದ ಆಮದಾಗುತ್ತವೆ. ಮುಲ್ಕಿ, ಹಂಗಾರಕಟ್ಟೆ, ಪಣಂಬೂರು, ಉಪ್ಪಿನಂಗಡಿ, ಬೆಳ್ತಂಗಡಿ, ಬಂಟವಾಳ, ಉಳ್ಳಾಲ, ಪುತ್ತೂರು ಮೊದಲಾದವು ಜಿಲ್ಲೆಯ ಇತರ ವ್ಯಾಪಾರ ಕೇಂದ್ರಗಳಾಗಿವೆ. ಅಲ್ಲಲ್ಲಿ ನಡೆಯುವ ಸಂತೆಗಳು ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ವ್ಯಾಪಾರ ನಡೆಯುತ್ತದೆ.

	ದಕ್ಷಿಣ ಕನ್ನಡ ಜಿಲ್ಲೆ ವ್ಯಾಪಾರ ಮತ್ತು ಬ್ಯಾಂಕಿಂಗ್ ಉದ್ಯಮದಲ್ಲಿ ಮುಂದಿದೆ. 1906ರಲ್ಲಿ ಇಲ್ಲಿ ಕೆನರಾ ಬ್ಯಾಂಕ್ ಅಸ್ತಿತ್ವಕ್ಕೆ ಬಂತು. 1913ರಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಸ್ಥಾಪನೆಯಾಯಿತು. ಸಿಂಡಿಕೇಟ್ ಮತ್ತು ಕೆನರಾ ಬ್ಯಾಂಕುಗಳಂಥ ರಾಷ್ಟ್ರೀಕರಣಗೊಂಡ ಬ್ಯಾಂಕುಗಳು ಪ್ರಾರಂಭಗೊಂಡದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಇಲ್ಲಿಯ ಕರ್ನಾಟಕ ಮತ್ತು ವಿಜಯಾಬ್ಯಾಂಕುಗಳೂ ರಾಷ್ಟ್ರೀಯ ವ್ಯಾಪ್ತಿಯಲ್ಲಿ ಬೆಳೆದಿವೆ. ಈಗ 13 ಸಹಕಾರಿ ಬ್ಯಾಂಕುಗಳೂ 299 ವಾಣಿಜ್ಯ ಬ್ಯಾಂಕುಗಳೂ ಇವೆ (2001). ಇವುಗಳಲ್ಲದೆ ಕೆಲವು ಹಣಕಾಸಿನ ಕಾಪೆರ್Çೀರೇಷನ್‍ಗಳೂ ಕೈಗಾರಿಕಾ ಸಹಕಾರ ಬ್ಯಾಂಕುಗಳೂ ಇವೆ. ಇಲ್ಲಿಯ ಜನಸಂಖ್ಯೆಯ ದೃಷ್ಟಿಯಿಂದ ರಾಜ್ಯಗಳ ರಾಜಧಾನಿಗಳ ಹೊರತು ಭಾರತದ ಯಾವುದೇ ಜಿಲ್ಲೆಗಿಂತಲೂ ಇಲ್ಲಿ ಅತ್ಯದಿsಕ ಬ್ಯಾಂಕು ಶಾಖೆಗಳಿವೆ. ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳು, ಕೃಷಿ ಸಾಲ ನೀಡಿಕೆ ಸಂಘಗಳು, ರೆಗ್ಯುಲೇಟೆಡ್ ಮಾರುಕಟ್ಟೆಗಳೂ ಇವೆ.

	ಸಾರಿಗೆ-ಸಂಪರ್ಕಕ್ಕೆ ಇಲ್ಲಿನ ಭೌಗೋಳಿಕ ಸನ್ನಿವೇಶ ಅನುಕೂಲಕರವಾಗಿಲ್ಲದಿದ್ದರೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗಿದೆ. ಶಿರಾಡಿ ಘಾಟ್ ರಸ್ತೆ, ಬಿಸಿಲೆ ಘಾಟ್ ರಸ್ತೆ, ನಗೋಡಿ ಘಾಟ್ ರಸ್ತೆ ಮತ್ತು ಸಂಪಾಜೆ ಘಾಟ್ ರಸ್ತೆ — ಇವು ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳೊಂದಿಗೂ ಒಳನಾಡಿಗೂ ಸಂಪರ್ಕ ಒದಗಿಸುತ್ತವೆ. ಮಂಗಳೂರು-ಹಾಸನ ರಸ್ತೆ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯೆಂದು ಪರಿಗಣಿಸಲಾಗಿದೆ. ಪಶ್ಚಿಮ ಕರಾವಳಿಯಲ್ಲಿ ಮುಂಬಯಿಯಿಂದ ಕನ್ಯಾಕುಮಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಇದೆ. ಇದು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯೊಂದಿಗೆ ಸಂಪರ್ಕ ಕಲ್ಪಿಸಿದೆ. ಈಗ ಜಿಲ್ಲೆಯಲ್ಲಿರುವ ಒಟ್ಟು ರಾಷ್ಟ್ರೀಯ ಹೆದ್ದಾರಿಯ ಉದ್ದ 177ಕಿಮೀ.

	ಈ ಜಿಲ್ಲೆಯಲ್ಲಿ ಉತ್ತಮ ರಸ್ತೆ ಸಂಪರ್ಕವಿದೆ. ಜಿಲ್ಲೆಯಲ್ಲಿ 849ಕಿಮೀ ಜಿಲ್ಲಾ ಮುಖ್ಯ ರಸ್ತೆ 1269ಕಿಮೀ ಗ್ರಾಮಾಂತರ ರಸ್ತೆಗಳಿವೆ. ತಾಲ್ಲೂಕು ಅಬಿsವೃದ್ಧಿ ಮಂಡಲಿ ರಸ್ತೆಗಳ ಉದ್ದ 368ಕಿಮೀ (1999). ಹಾಸನ - ಮಂಗಳೂರು ರೈಲು ಮಾರ್ಗದ ಒಟ್ಟು ಉದ್ದ 189ಕಿಮೀ ಇದರಲ್ಲಿ 112ಕಿಮೀ ಉದ್ದದ ಮಾರ್ಗ ಈ ಜಿಲ್ಲೆಯಲ್ಲಿಯೇ ಹಾದು ಹೋಗುತ್ತದೆ. ಜಿಲ್ಲೆಯಲ್ಲಿ ಒಟ್ಟು 155ಕಿಮೀ ರೈಲು ಮಾರ್ಗವಿದೆ. ಕೊಂಕಣ ರೈಲು ಮಾರ್ಗದಿಂದಾಗಿ ಜಿಲ್ಲೆ ಪಶ್ಚಿಮ ಭಾರತದೊಂದಿಗೆ ನೇರ ಸಂಪರ್ಕ ಹೊಂದಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಕಟ್ಟಲಾಗಿರುವ ಹೊಸ ಬಂದರು ಕರ್ನಾಟಕದ ಹಾಗೂ ಈ ಜಿಲ್ಲೆಯ ಅತಿದೊಡ್ಡ ಬಂದರು.ಇದಲ್ಲದೆ ಇತರ ಚಿಕ್ಕ ಬಂದರುಗಳು ಚಿಕ್ಕ ಹಡಗುಗಳ ಮತ್ತು ದೋಣಿಗಳ ಸಂಚಾರಕ್ಕೆ ಅನುಕೂಲಕರವಾಗಿವೆ. ನದಿಗಳ ಮುಖಾಂತರ ಒಳನಾಡ ದೋಣಿ ಸಂಚಾರಕ್ಕೂ ಅವಕಾಶವಿದೆ. ಮಂಗಳೂರಿನಿಂದ ಬೆಂಗಳೂರು, ಬೆಳಗಾಂವಿ, ಮಂಬಯಿಗಳಿಗೆ ವಿಮಾನ ಸಂಚಾರವಿದೆ.

	ದಕ್ಷಿಣ ಕನ್ನಡ ಜಿಲ್ಲೆ ವಿದ್ಯಾಭ್ಯಾಸದಲ್ಲಿ ಗಣನೀಯ ಪ್ರಗತಿ ಸಾದಿsಸಿದೆ. ಈ ಜಿಲ್ಲೆಯಲ್ಲಿ ಸೇ.83.47 ಸಾಕ್ಷರತೆ ಇದೆ (2001).

ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ನಗರ ಜಿಲ್ಲೆಯನ್ನು ಬಿಟ್ಟರೆ ಈ ಜಿಲ್ಲೆ ಅತಿ ಹೆಚ್ಚಿನ ಪ್ರಮಾಣದ ಸಾಕ್ಷರತೆಯುಳ್ಳ ಜಿಲ್ಲೆಯಾಗಿದೆ. ಇಲ್ಲಿ ಸರ್ಕಾರ, ಖಾಸಗಿ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳಿವೆ. ಜಿಲ್ಲೆ ಉನ್ನತ ಶಿಕ್ಷಣ ಮತ್ತು ಸಾಮಾನ್ಯ ಶಿಕ್ಷಣದ ತವರಾಗಿದೆ. ಜಿಲ್ಲೆಯಲ್ಲಿ 1284 ಪ್ರಾಥಮಿಕ ಶಾಲೆಗಳು, 290 ಫ್ರೌಢ ಶಾಲೆಗಳು, 82 ಪದವಿಪೂರ್ವ ಕಾಲೇಜುಗಳು ಇವೆ. 44 ಸಾಮಾನ್ಯ ಶಿಕ್ಷಣ ಕಾಲೇಜುಗಳು, 5 ಪಾಲಿಟೆಕ್ನಿಕ್‍ಗಳಿವೆ. ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ 3, ಒಂದು ವೈದ್ಯಕೀಯ ಕಾಲೇಜು, ಒಂದು ಹೋಮಿಯೊಪತಿ ಕಾಲೇಜು, 3 ಭಾರತೀಯ ಪದ್ಧತಿ ವೈದ್ಯ ಕಾಲೇಜುಗಳಿವೆ. ಎರಡು ದಂತ ವೈದ್ಯಕೀಯ ಕಾಲೇಜುಗಳಿವೆ (2001). ಒಂದು ಸರ್ಕಾರಿ ತಾಂತ್ರಿಕ ಶಾಲೆಯೂ ಇದೆ. 1969ರಲ್ಲಿ ಮಂಗಳೂರಿನಲ್ಲಿ ಮತ್ಸ್ಯೋದ್ಯಮ ಕಾಲೇಜು ಸ್ಥಾಪನೆಯಾಯಿತು. ವಾಣಿಜ್ಯ ಶಿಕ್ಷಣ ಸಂಸ್ಥೆಗಳು ಮತ್ತು ಸಂಸ್ಕøತ ಪಾಠಶಾಲೆಗಳಿವೆ.

	1968ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮಂಗಳೂರಿನ ಬಳಿ ಕೊಣಾಜೆ ಎಂಬಲ್ಲಿ ಮಂಗಳಗಂಗೋತ್ರಿ ಎಂಬ ಒಂದು ಸ್ನಾತಕೋತ್ತರ ಶಿಕ್ಷಣ ಕೇಂದ್ರವನ್ನು ತೆರೆಯಿತು. ಅಲ್ಲಿ ಮೊದಲಿಗೆ ವಿe್ಞÁನ ಮತ್ತು ಮಾನವಿಕ ಶಿಕ್ಷಣಕ್ಕೆ ಸಂಬಂದಿsಸಿದಂತೆ ಐದು ವಿಭಾಗಗಳು ಪ್ರಾರಂಭವಾದವು. 1980ರಲ್ಲಿ ಈ ಕೇಂದ್ರ ಪ್ರತ್ಯೇಕ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿತು. (ನೋಡಿ: ಮಂಗಳೂರು ವಿಶ್ವವಿದ್ಯಾಲಯ).

 	ಇಲ್ಲಿ 6 ಸರ್ಕಾರಿ ಆಸ್ಪತ್ರೆಗಳು, 64 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 40 ಪ್ರಾಥಮಿಕ ಆರೋಗ್ಯ ಘಟಕಗಳು, 28 ಕುಟುಂಬ ಯೋಜನಾ ಕೇಂದ್ರಗಳಿವೆ. ಇತರ ಖಾಸಗಿ ಡಿಸ್ಪೆನ್ಸರಿಗಳಿವೆ.

	ಜಿಲ್ಲೆಯ ಜನಸಂಖ್ಯೆಯಲ್ಲಿ ಸೇ.38.41ರಷ್ಟು ಪಟ್ಟಣವಾಸಿಗಳು. ಪಟ್ಟಣಗಳಲ್ಲಿ ಜನಸಾಂದ್ರತೆ ಹೆಚ್ಚುತ್ತಿದೆ. ಜಿಲ್ಲೆಯ ಜನಸಾಂದ್ರತೆ ಚ.ಕಿಮೀಗೆ 371.8. ಈ ಜಿಲ್ಲೆಯ ಜನರು ಹೊರರಾಜ್ಯಗಳಲ್ಲಿ ಹಾಗೂ ಕರ್ನಾಟಕದ ಇತರೆಡೆಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ನೆಲೆಸಿ, ಸರ್ಕಾರಿ ನೌಕರಿ, ಬ್ಯಾಂಕಿಂಗ್ ಉದ್ಯಮ, ತಂತ್ರಾಂಶ, ಪ್ಲಾಂಟೇಷನ್, ಕೃಷಿ, ವ್ಯಾಪಾರ ಮತ್ತು ಹೋಟೆಲು ಉದ್ಯಮಗಳಲ್ಲಿ ನಿರತರಾಗಿದ್ದಾರೆ.

ಇಲ್ಲಿ ಶೈವ, ಭಾಗವತ, ಮಾಧ್ವ, ಬೌದ್ಧ, ಜೈನ ಮೊದಲಾದ ಮತಾನುಯಾಯಿಗಳಿದ್ದಾರೆ. ಕ್ರೈಸ್ತ ಹಾಗೂ ಇಸ್ಲಾಂ ಮತಾನುಯಾಯಿಗಳೂ ಸಾಕಷ್ಟಿದ್ದಾರೆ. ಜನರು ಹೆಚ್ಚಾಗಿ ದ್ರಾವಿಡ ಸಂಸ್ಕøತಿಯ ವಿವಿಧ ರೀತಿಯ ಶಕ್ತಿಪೂಜೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮಾರಿ ಮತ್ತು ದುರ್ಗಿ ಪೂಜೆಗಳು, ಭೂತಾರಾಧನೆ, ಕೋಲಕಟ್ಟುವುದು ಮೊದಲಾದ ಜನಪದ ಆರಾಧನಾ ಪದ್ಧತಿಗಳು ಪ್ರಚಲಿತವಾಗಿವೆ. ಈ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಕದ್ರಿ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತವೆ. ಯಕ್ಷಗಾನ ಈ ಜಿಲ್ಲೆಯ ವಿಶಿಷ್ಟ ಜನಪದ ಕಲೆ. ಕೋಳಿ ಅಂಕ ಮತ್ತು ಕಂಬಳ ಇಲ್ಲಿ ವಿಶೇಷವಾಗಿ ಪ್ರಚಲಿತವಿದೆ.

	ಈ ಜಿಲ್ಲೆಯಲ್ಲಿ ಧಾರ್ಮಿಕ ಸಮನ್ವಯತೆ ಮತ್ತು ವಿದ್ಯಾದಾನಕ್ಕೆ ಹೆಸರಾದ ಧರ್ಮಸ್ಥಳ, ವೀರಶೈವ ಮಠ ಪರಂಪರೆಯನ್ನು ನಡೆಸಿಕೊಂಡು ಬರುತ್ತಿರುವ ಗುರುಪುರ, ದೇವಾಲಯಗಳಿಗೆ ಹೆಸರಾದ ನಂದಾವರ, ನಾರವಿ, ಪೆÇಳಲಿ ದುರ್ಗಾಪರಮೇಶ್ವರಿ ದೇವಾಲಯವಿರುವ ಕಟೀಲು, ಆದಿಶಂಕರಾಚಾರ್ಯರು ಸಂದರ್ಶಿಸಿದ ಸುಬ್ರಹ್ಮಣ್ಯ, ಕದ್ರಿ, ಕಡಬ, ಕರಿಮಂಜೇಶ್ವರ, ಪುಣ್ಯಕ್ಷೇತ್ರವೂ ರಮ್ಯದೃಶ್ಯ ತಾಣವೂ ಆದ ಉಪ್ಪಿನಂಗಡಿ, ಸಿಸಿಲ, ಮುಸ್ಲಿಮರ ಯಾತ್ರಾಸ್ಥಳವಾದ ಹಾಗೂ ಹಳೆಯ ಕಾಲದ ಚರ್ಚ್ ಇರುವ ಉಲ್ಲಾಳ - ಮೊದಲಾದ ಧಾರ್ಮಿಕ ಪರಂಪರೆಯನ್ನು ಪಡೆದ ಸ್ಥಳಗಳು ಇವೆ. ಬೈಲಂಗಡಿ, ಬಂಗಾಡಿ, ಮಂಗಳೂರು, ಸಿಸಿಲ, ವೇಣೂರು, ವಿಟ್ಲ ಮೊದಲಾದ ಐತಿಹಾಸಿಕ ಸ್ಥಳಗಳಿವೆ. ಅಳಿಕೆ, ಸುರತ್ಕಲ್, ಉಜಿರೆ ಮೊದಲಾದವು ಶಿಕ್ಷಣಕ್ಕೆ ಪ್ರಸಿದ್ಧ.

	ದಕ್ಷಿಣ ಕನ್ನಡ ಜಿಲ್ಲೆ ಪ್ರಾಚೀನ ಕಾಲದಿಂದಲೂ ವಿದೇಶ ಗಳೊಂದಿಗೆ ಸಂಪರ್ಕ ಹೊಂದಿತ್ತು. ರೋಮನ್ ಮತ್ತು ಗ್ರೀಕ್ ಹಾಗೂ ಅರಬ್ ವರ್ತಕರು ಇಲ್ಲಿನ ಬಂದರುಗಳಿಗೆ ಬಂದು ಹೋಗುತ್ತಿದ್ದರು. ಐತಿಹಾಸಿಕವಾಗಿ ಆಳುಪ ವಂಶದ ಅರಸರು ಈ ಪ್ರದೇಶವನ್ನು 7ನೆಯ ಶತÀಮಾನದಿಂದ 14ನೆಯ ಶತಮಾನದವರೆಗೂ ಆಳಿದರು. ಅವರು ಇಲ್ಲಿನ ಸಂಸ್ಕøತಿ ಮತ್ತು ನಾಗರಿಕತೆಗಳಿಗೆ ಭದ್ರ ಬುನಾದಿ ಹಾಕಿದರು. ಉದ್ಯಾವರ, ಮಂಗಳೂರು ಮತ್ತು ಬಾರಹ ಕನ್ಯಾಪುರ ಅವರ ರಾಜಧಾನಿಯಾಗಿದ್ದವು (ನೋಡಿ: ಉಡುಪಿ ಜಿಲ್ಲೆ). ಅವರ ರಾಜ್ಯವು ಘಟ್ಟದ ಮೇಲಿನ ಮಲೆನಾಡಿನ ಭಾಗದಲ್ಲೂ ವಿಸ್ತರಿಸಿದ್ದಿತು. ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಮಂಗಳೂರು ಮತ್ತು ಬಾರಕೂರನ್ನು ಕೇಂದ್ರವಾಗಿ ಹೊಂದಿ ಅಲ್ಲಿಂದ ಪ್ರಾಂತ್ಯಾಧಿಕಾರಿಗಳು ಆಳುತ್ತಿದ್ದರು. ಅವರ ಸಾಮಂತರಾಗಿ ಕಾರ್ಕಳದ ಭೈರರಸರು, ಮೂಡಬಿದರೆಯ ಚೌಟರಸರು, ವೇಂಬಾರಿನ ಅಜಿಲರು, ಬಂಗವಾಡಿಯ ಬಂಗರು ಆಳುತ್ತಿದ್ದರು. ಇವರೆಲ್ಲ ಹೆಚ್ಚಾಗಿ ಜೈನಧರ್ಮಕ್ಕೆ ಪ್ರೋತ್ಸಾಹ ನೀಡಿದರು.

 	ಕೆಳದಿ ಅರಸರ ಕಾಲದಲ್ಲಿ ಇಲ್ಲಿ ಐರೋಪ್ಯ ವಸಾಹತುಕಾರರನ್ನು ನಿಗ್ರಹಿಸುವ ಕಾರ್ಯ ನಡೆಯಿತು. ದಕ್ಷಿಣ ಕನ್ನಡ ಪ್ರದೇಶ 1763ರಲ್ಲಿ ಬಿದನೂರಿನೊಂದಿಗೆ ಹೈದರ್ ಅಲಿಯ ವಶವಾಗಿ ಮುಂದೆ ಅವನ ಮಗ ಟಿಪ್ಪುವಿನ ಆಳಿಕೆಗೆ ಸೇರಿತು. ಶ್ರೀರಂಗಪಟ್ಟಣದ ಪರಾಭವದಿಂದ 1799ರಲ್ಲಿ ಬ್ರಿಟಿಷರ ಆಡಳಿತಕ್ಕೆ ಬಂತು. ಬ್ರಿಟಿಷರ ಆಳಿಕೆಯ ಕಾಲದಲ್ಲಿ ಅವರು ದಕ್ಷಿಣ ಮತ್ತು ಉತ್ತರ ಕನ್ನಡ ಪ್ರದೇಶಗಳನ್ನು ಒಂದಾಗಿಸಿ ಮದರಾಸು ಪ್ರಾಂತ್ಯದ ಆಡಳಿತಕ್ಕೆ ಸೇರಿಸಿದರು. 1860ರಲ್ಲಿ ಮತ್ತೆ ಇದನ್ನು ದಕ್ಷಿಣ, ಉತ್ತರ ಎಂಬುದಾಗಿ ಎರಡಾಗಿ ಒಡೆದು 1862ರಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಬೊಂಬಾಯಿ ಪ್ರಾಂತ್ಯಕ್ಕೆ ಸೇರಿಸಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮದರಾಸು ಪ್ರಾಂತ್ಯದಲ್ಲೇ ಉಳಿಸಲಾಯಿತು.

	1895ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಆಗ ಅಮೀನ್ ದೀವಿ ದ್ವೀಪಗಳನ್ನೂ ಒಳಗೊಂಡಿತ್ತು. 1896ರಲ್ಲಿ ಈ ಜಿಲ್ಲೆಯಲ್ಲಿ ಮಂಗಳೂರು, ಕುಂದಾಪುರ, ಉಡುಪಿ, ಕಾಸರಗೋಡು ಮತ್ತು ಉಪ್ಪಿನಂಗಡಿ ತಾಲ್ಲೂಕುಗಳು ಮಾತ್ರ ಇದ್ದವು. 1912ರಲ್ಲಿ ಕಾರ್ಕಳ ತಾಲ್ಲೂಕೂ ಸೇರಿತು. 1954ರಲ್ಲಿ ಬೆಳ್ತಂಗಡಿ ತಾಲ್ಲೂಕನ್ನು ರಚಿಸಲಾಯಿತು. 1956ರ ನವೆಂಬರ್ 1ರ ವರೆಗೂ ಈ ಜಿಲ್ಲೆ ಮದರಾಸು ಪ್ರಾಂತ್ಯದ ಆಡಳಿತದಲ್ಲೇ ಇದ್ದು ರಾಜ್ಯ ಪುನರ್ವಿಂಗಡಣೆಯ ಪ್ರಕಾರ ವಿಶಾಲ ಕರ್ನಾಟಕ ಪ್ರಾಂತ್ಯಕ್ಕೆ ಸೇರಿತು. 1966ರಲ್ಲಿ ಪುತ್ತೂರನ್ನು ಸುಳ್ಯ ಮತ್ತು ಪುತ್ತೂರು ತಾಲ್ಲೂಕುಗಳಾಗಿ ವಿಭಾಗಿಸಲಾಯಿತು. 1997ರಲ್ಲಿ ಮತ್ತೆ ಜಿಲ್ಲೆ ವಿಭಜಿತವಾಯಿತು. ಅದರ ಒಂದು ಭಾಗದಿಂದ ಉಡುಪಿ ಜಿಲ್ಲೆಯನ್ನು ರಚಿಸಲಾಗಿದೆ.		
						*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ